ನೀಲಿ ಹರಳು ನೊಣ -
ಆತ್ರ್ರಾಪೊಡ ವಿಭಾಗ, ಇನ್ಸೆಕ್ಟವರ್ಗ, ಡಿಪ್ಟರ ಗಣ ಕ್ಯಾಲಿಪೋರಿಡೀ ಕುಟುಂಬಕ್ಕೆ ಸೇರಿದ ನೊಣ (ಬ್ಲೂ ಬಾಟಲ್ ಫ್ಲೈ). ಊಬಲು ನೊಣ ಪರ್ಯಾಯ ನಾಮ. ಕ್ಯಾಲಿಪೊರ ಇದರ ವೈಜ್ಞಾನಿಕ ಹೆಸರು. ಕ್ಯಾ. ಎರಿತ್ರೊಸಿಫ್ಯಾಲ ಮತ್ತು ಕ್ಯಾ. ಒಮಿಟೋರಿಯ ಎಂಬ ಎರಡು ಪ್ರಭೇದಗಳನ್ನು ಒಳಗೊಂಡಿದೆ. ಇದೇ ಗಣದ ಸಾರ್ಕೊಫೇಜಿಡೀ ಕುಟುಂಬಕ್ಕೆ ಸೇರಿದ ಮಾಂಸ ನೊಣಗಳಿಗೂ ಇವಕ್ಕೂ ಸಮಾನ ಲಕ್ಷಣಗಳಿವೆಯಾಗಿ ಕೆಲವು ಕೀಟತಜ್ಞರು ಎರಡು ಬಗೆಯವನ್ನು ಒಟ್ಟಾಗಿ ಮಿಟೊಪೈಯಿಡೀ ಎಂಬ ಕುಟುಂಬಕ್ಕೆ ಸೇರಿಸುತ್ತಾರೆ.

ನೀಲಿ ಹರಳು ನೊಣ ಹೆಚ್ಚು ಕಡಿಮೆ ಮನೆನೊಣದಷ್ಟೇ ಗಾತ್ರದ್ದು. ಇದರ ಮೈ ಬಣ್ಣ ಹೊಳೆಯುವ ನೀಲಿ ಅಥವಾ ಹಸುರು. ಮಾಂಸ ನೊಣಗಳಂತೆಯೇ ಇದು ಕೂಡ ಮಾಂಸಭಕ್ಷಿ. ಸತ್ತ ಪ್ರಾಣಿಯ ದೇಹ ಅಥವಾ ಮಲಗಳ ಮೇಲೆ ಮೊಟ್ಟೆಯಿಡುತ್ತದೆ. ಡಿಂಬಗಳು ಕೊಳೆಯುವ ಮಾಂಸವನ್ನು ತಿಂದು ಬೆಳೆಯುವುವು. ಇದು ಅಸಹ್ಯ ಹುಟ್ಟಿಸುವಂಥದಾದರೂ ಈ ಡಿಂಬಗಳು ಸತ್ತಪ್ರಾಣಿಯ ದೇಹವನ್ನು ತಿನ್ನುವುದರ ಮೂಲಕ ಮನುಷ್ಯನಿಗೆ ಉಪಕಾರವನ್ನೇ ಎಸಗುವುವು. ಅದು ಕೆಲವೊಮ್ಮೆ ಅತಿಸಾರ ಮುಂತಾದ ರೋಗಗಳ ಅಪಾಯಕರ ಕ್ರಿಮಿಗಳನ್ನು ಒಂದು ಕಡೆಯಿಂದ ಇನ್ನೊಂದೆಡೆಗೆ ಒಯ್ಯುವುದರಿಂದ ಈ ನೊಣ ಒಂದು ತೆರನ ಪಿಡುಗಾಗಿರುವುದೂ ಉಂಟು.
(ಎಸ್.ಎಚ್.ಒ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ